ಮಾಧ್ಯಮಿಕ ಪಂಥ	-	
ಬೌದ್ಧದರ್ಶನದ ನಾಲ್ಕು ಸಂಪ್ರದಾಯಗಳಲ್ಲಿ ಕೊನೆಯದು. ಇದನ್ನು ಶೂನ್ಯವಾದ ಎಂದೂ ಕರೆಯಲಾಗಿದೆ. ನಾಗಾರ್ಜುನನೆ ಮಾಧ್ಯಮಿಕ ಕಾರಿಕೆಗಳು, ಇದರ ಮೇಲೆ ಚಂದ್ರಕೀರ್ತಿಯ (ಕ್ರಿ.ಶ.600) ಪಸನನ ಪದಾ ಎಂಬ ವ್ಯಾಖ್ಯಾನ ಮಾಧ್ಯಮಿಕ ಪಂಥದ ಆಧಾರಗ್ರಂಥಗಳು, ನಾಗಾರ್ಜುನನ ಶಿಷ್ಯನಾಗಿದ್ದ ಆರ್ಯದೇವ (ಕಾಣದೇವ) ಚತುಃಶತಕವನ್ನು ಬರೆದು ಮಾಧ್ಯಮಿಕ ದರ್ಶನವನ್ನು ರೂಢಿಸಿದ. ಇದರ ಮೇಲೂ ಚಂದ್ರಕೀರ್ತಿ ವೃತ್ತಿಯನ್ನು ಬರೆದಿದ್ದಾನೆ. ಆರ್ಯದೇವನೇ ಬರೆದ ಎನ್ನುವ ಮುಷ್ಟಿ ಪ್ರಕರಣವೆಂಬ ಗ್ರಂಥವೂ ಮಾಧ್ಯಮಿಕ ನಿಲವನ್ನು ವಿವರಿಸುತ್ತದೆ. ಈ ಗ್ರಂಥಕ್ಕೆ ಮೂಲಸಂಸ್ಕøತದಿಂದ ಮೂಡಿಬಂದ ಚೀನೀ ಮತ್ತು ಟಬೆಟನ್ ಅನುವಾದಗಳು ಮಾತ್ರ ಇಂದು ಉಪಲಬ್ಧವಾಗಿವೆ. ನಾಗಾರ್ಜುನನ ಮಾಧ್ಯಮಿಕ ಶಾಸ್ತ್ರದಲ್ಲಿ ನಾನೂರು ಕಾರಿಕೆಗಳಿವೆ. ಅಕುತೋಭಯ ಎಂಬ ವ್ಯಾಖ್ಯಾನ ಸಿದ್ಧಪಡಿಸಿದ್ದಾನೆ. ಈ ವ್ಯಾಖ್ಯಾನದ ಮೂಲಸಂಸ್ಕøತ ಪಾಠ ಇಂದು ಉಪಲಬ್ಧವಿಲ್ಲ. ಇದರ ಟಿಬೆಟನ್ ಅನುವಾದ ಉಳಿದಿವೆ.

ಮಾಧ್ಯಮಿಕ ಪಂಥವನ್ನು ನಾಸ್ತಿಕವಾದವೆಂದು ವೈದಿಕವಾದವೆಂದು ವೈದಿಕವಾದಿಗಳು ದೂಷಿಸಿದರು. ಇದು ನಾಸ್ತಿಕವಾದವಾಗಲೀ ಚಾರ್ವಾಕವಾದವಾಗಲೀ ಅಲ್ಲವೆಂದು ಚಂದ್ರಕೀರ್ತಿ ಸಾಧಿಸಿದ್ದಾನೆ. ನಾಗಾರ್ಜುನನ ದರ್ಶನದಲ್ಲಿ ಶೂನ್ಯತೆಯೆಂಬ ಪದದ ವ್ಯವಹಾರವಿದ್ದರೂ ಅದು ಏನೂ ಇಲ್ಲವೆಂಬ ಅರ್ಥದಲ್ಲಲ್ಲ. ಅವ್ಯಾಕೃತೆವಾದ ಸತ್ಯವನ್ನು ವ್ಯಾವಹಾರಿಕ ಪ್ರಪಂಚದಿಂದ ಬೇರ್ಪಡಿಸಿ ನಿರ್ದೇಶಿಸುವ ಪದ ಅದು. ಈ ನಿಲವನ್ನು ಮಾಧ್ಯಮಿಕವೆಂದು ಕರೆದಿರುವುದರ ಔಚಿತ್ಯ ವಿಗ್ರಹವ್ಯಾವರ್ತಿನಿಯಲ್ಲಿ ಬರುವ ಶೂನ್ಯತೆಯ ವಿವರಣೆಯಿಂದ ಸೂಚಿತವಾಗುತ್ತದೆ. ಬೌದ್ಧಧರ್ಮದ ಆಧಾರ ಕಲ್ಪನೆಯಾದ ಪ್ರತೀತ್ಯಸಮುತ್ಪಾದವನ್ನು ಎತ್ತಿಕೊಂಡು, ಯಾವುದರಿಂದ ಉತ್ಪತ್ತಿಯಾಗುವುದೋ ಅದೇ ಶೂನ್ಯತೆ (ಯಃ ಪ್ರತೀತ್ಯ ಸಮುತ್ಪಾದಃ ಶೂನ್ಯತಾಂ ತಾಂ ಪ್ರಚಕ್ಷತೇ), ಅದಕ್ಕೆ ಅನೇಕಾರ್ಥಗಳುಂಟು. ಅವುಗಳಲ್ಲಿ ಮಧ್ಯ ಮಾರ್ಗವನ್ನು ಹಿಡಿದು ಈ ನಿಲುವನ್ನು ತಳೆದಿರುವುದರಿಂದ ಇದು ಮಾಧ್ಯಮಿಕವೆನಿಸಿಕೊಳ್ಳುತ್ತದೆ. ಇದೆ, ಇಲ್ಲ ಎನ್ನುವುದೆರಡೂ ದೂರದ ಕೋಟಿಗಳೂ; ಆ ಎರಡೂ ಇವೆ; ಆ ಎರಡೂ ಇಲ್ಲ ಎನ್ನುವುದು ಮತ್ತೆರಡು ಕೋಟಿಗಳೂ. ಈ ಚತುಷ್ಕೋಟಿಗಳ ವ್ಯಾಪ್ತಿಗೂ ಸೇರದಿರುವುದೇ ತತ್ತ್ವ. ಇದೆ, ಇಲ್ಲ ಎಂಬ ಎರಡೂ ಅಂಶಗಳನ್ನೂ ಬಿಟ್ಟು (ಉ ಭೇ ಅಂತೇ), ನಿ ಃ ಸ್ವಭಾವವಾದ ಶೂನ್ಯತೆಯಿದೆ ಎಂಬುದು ಮಧ್ಯ ಮಾರ್ಗ. ಈ ಮಾರ್ಗ ತಿಳಿಯಪಡಿಸುವ ಶಾಸ್ತ್ರ ಮಾಧ್ಯಮಿಕಶಾಸ್ತ್ರ.

ಈ ಎರಡೂ ಅತ್ಯಂತಗಳನ್ನು ಬಿಟ್ಟು ಮಧ್ಯ ಮಾರ್ಗವನ್ನು ಅನುಸರಿಸುವುದರ ಅಗತ್ಯವನ್ನು ಆರಂಭದ ಕಾರಿಕೆಯೇ ಸ್ಪಷ್ಟಪಡಿಸುತ್ತದೆ. ಅನಿರೋಧ, ಅನುತ್ಪಾದ (ಸಾವೂ ಇಲ್ಲ, ಹುಟ್ಟೂ ಇಲ್ಲ) ಅನುಚ್ಛೇದ ಅಶಾಶ್ವತ (ಭಂಗವೂ ಇಲ್ಲ, ಸ್ಥಿರತೆಯೂ ಇಲ್ಲ), ಅನೇಕಾರ್ಥ, ಅನಾನಾರ್ಥ (ಬಹುವಾದುದೂ ಅಲ್ಲ, ಏಕವಾದುದೂ ಅಲ್ಲ). ಅನಾಗಮ ಅನಿರ್ಗಮ (ಬರುವುದೂ ಇಲ್ಲ, ಹೋಗುವುದೂ ಇಲ್ಲ)-ಈ ಎಂಟು ನೇತಿಗಳ ಬಲದಿಂದ ಯಾವ ಅತ್ಯಂತವಾದವನ್ನಾದರೂ ನಿರಸನ ಮಾಡಬಹುದು. ಇಲ್ಲಿ ಮಧ್ಯಮಾರ್ಗ ಎಂದರೆ ಅವ್ಯಾಕೃತವಾದ ಅವ್ಯಾಪ್ತವಾದ ನಿರ್ವಾಣವೇ. ಉಚ್ಛೇದ-ಶಾಶ್ವತತೆಗಳ ಮಧ್ಯ ಅದಿರುವುದರಿಂದ ಅದು ಮಾಧ್ಯಮಿಕ.

ಶೂನ್ಯತೆಯನ್ನು ಎರಡು ನೆಲೆಗಳಲ್ಲಿ ನಿರೂಪಿಸಲಾಗುತ್ತದೆ. ಒಂದು, ಸಾಧಾರಣವಾದ ಸಂಸಾರದಲ್ಲಿ ಪ್ರಕಟವಾಗುವ ಸಂಸ್ಕøತ ಶೂನ್ಯತೆ, ಸಂಸ್ಕøತ ಎಂದರೆ ಇಲ್ಲಿ ಮಾಡಿದ್ದು (ಕೃ ಧಾತುವಿನಿಂದ) ಉಂಟಾದದ್ದು, ಒದಗಿದ್ದು ಎಂದರ್ಥ. ಇನ್ನೊಂದು, ಪರಮಾರ್ಥದ ನೆಲೆಯಲ್ಲಿ ಅಭಿವ್ಯಕ್ತವಾದ ಅಸಂಸ್ಕøತ ಶೂನ್ಯತೆ. ಸಂಸ್ಕøತ ಧರ್ಮಗಳಲ್ಲಿ ಶೂನ್ಯತೆ ಎಂದರೆ ವಿಶೇಷಗಳ ಅಭಾವ, ವ್ಯಕ್ತಿಗಳು ವೈಯಕ್ತಿಕವಾಗಿ ಇಲ್ಲವೆಂದು ಭಾವ. ಕಾರಣ, ಪ್ರತ್ಯಯಗಳಿಲ್ಲದೆ ಯಾವ ಧರ್ಮವೂ ಇರುವುದಿಲ್ಲ. ಆದ ಕಾರಣ ಅಶೂನ್ಯ ಅಥವಾ ಅವಿಕಾರ್ಯ ಎನ್ನಬಹುದಾದ ಧರ್ಮವೇ ಇಲ್ಲ. ನಾಗಾರ್ಜುನನ ಒಂದು ಕಾರಿಕೆ ಈ ಅರ್ಥವನ್ನು ಬಿಡಿಸಿ ಹೇಳುತ್ತದೆ- `ಅಪ್ರತೀತ್ಯ ಸಮುತ್ಪನ್ನೋಧರ್ಮಃ ಕಶ್ಚಿನ್ನ ವಿದ್ಯತೇ ಯಸ್ಮಾತ್ತಸ್ಮಾದಶೂನ್ಯೋಹಿ ಧರ್ಮಃ ಕಶ್ಚಿನ್ನ ವಿದ್ಯತೇಃ' ಕಾರಣ ಪ್ರತ್ಯಯಗಳಿಂದ ಉಂಟಾದ ಎಲ್ಲ ವಸ್ತುವೂ ಕಾರ್ಯಕಾರಣ ನಿಯಮದಿಂದ ಬದ್ಧವಾಗಿರುವುದರಿಂದ ಅದು ವಿಕಾರ್ಯವಾದದ್ದು, ಸ್ವಭಾವ ಶೂನ್ಯವಾದದ್ದು, ನಿಃಸ್ವಭಾವವಾದದ್ದು ಎಂದು ಆರ್ಯದೇವ ವಿವರಿಸುತ್ತಾನೆ. ಸ್ವಭಾವದಿಂದಲೇ ವಸ್ತುಗಳು ಉಂಟಾಗುವುದೆಂದು ತೋರಿದರೆ (ಸ್ವಭಾವಾದ್ಯದಿ ಭಾವಾನಾಂ ಸದ್ಭಾವ ಮನುಪಶ್ಯಸಿ). ಆ ವಸ್ತುಗಳ ಉತ್ಪತ್ತಿಗೆ ಕಾರಣವೇ ಇಲ್ಲವೆಂದು ಹೇಳಬೇಕಾಗುವುದು (ಅಹೇತು ಪ್ರತ್ಯಯಾನ್ ಭಾವಾಂಸ್ತ್ವಮೇವಂ ಸತಿ ಪಶ್ಯಸಿ). ಸ್ವಭಾವವಿದ್ದ ವಸ್ತುವಿಗೆ ಉತ್ಪತ್ತಿ-ವಿನಾಶವೆಂದರೆ ಅರ್ಥವಿಲ್ಲ; ಅಂಥವಸ್ತು ಕಾರಣ ಪ್ರತ್ಯಯ ನಿಯತಿಗೆ ಮೀರಿದುದು ಎಂದು ಹೇಳಬೇಕಾಗುವುದು. ಆದರೆ ಎಲ್ಲ ವಸ್ತುಗಳೂ ಕಾರಣಪ್ರತ್ಯಯಗಳಿಂದಲೇ ಉಂಟಾಗುವುದೆಂದು ನಮಗೆ ಸಿದ್ಧವಾಗಿದೆಯಲ್ಲವೆ? ಎಂದಮೇಲೆ ಅವೆಲ್ಲವೂ ಸ್ವಭಾವ ಶೂನ್ಯವಾದವು. ಶೂನ್ಯತೆಯನ್ನು ಒಪ್ಪಿದರೆ ಮಾತ್ರ ಸಾಮಾನ್ಯ ಜಗತ್ತಿನ ಆಗುಹೋಗುಗಳನ್ನು ವಿವರಿಸುವುದು ಸಾಧ್ಯ. ಅದನ್ನು ಅಂಗೀಕರಿಸಿದರೆ ಪ್ರಪಂಚದಲ್ಲಿ ಕಾರ್ಯವಿಲ್ಲ, ಕಾರಣವಿಲ್ಲ, ಕರ್ತೃವಿಲ್ಲ ಕರಣವಿಲ್ಲ, ಉತ್ಪಾದವಿಲ್ಲ. ವಿರೋಧವಿಲ್ಲ ಎಂಬ ವಾದ ಪ್ರಸಕ್ತವಾಗುವುದು. ವ್ಯಾವಹಾರಿಕ ದೃಷ್ಟಿಯಿಂದ ಹೀಗೆ ಶೂನ್ಯತೆ ಸಿದ್ಧವಾಗುತ್ತದೆ. ಪಾರಮಾರ್ಥಿಕ ನೆಲೆಯಲ್ಲಿ ಶೂನ್ಯತೆ ಅಸಂಸ್ಕøತವಾದುದು ಎಂದರೆ ಅತ್ಯಂತ ಶೂನ್ಯತೆ. ಶೂನ್ಯತೆಯನ್ನು ಒಪ್ಪಿದರೆ ಎಲ್ಲವೂ ಗ್ರಾಹ್ಯವಾಗುತ್ತದೆ. ಶೂನ್ಯತೆಯನ್ನು ಒಪ್ಪದಿದ್ದರೆ ಯಾವುದೂ ಗ್ರಾಹ್ಯವಾಗದು ಎಂದು ನಾಗಾರ್ಜುನನ ವಾದ (ಸರ್ವಂಚ ಯುಜ್ಯತೇ ತಸ್ಯ ಶೂನ್ಯತಾ ಯಸ್ಯ ಯುಜ್ಯತೇ ಸರ್ವಂನ ಯುಜ್ಯತೇ. ತಸ್ಯಶೂನ್ಯತಾ ಯಸ್ಯ ನಯುಜ್ಯತೇ) ನಿಷ್ಪ್ರಕಾರಕವಾದ, ಅಪರಿಮಿತವಾದ ಶೂನ್ಯತೆಯಿರುವುದರಿಂದಲೇ ಸಂಸಾರದಲ್ಲಿ ಆಗುಹೋಗುಗಳು, ಕಾರ್ಯ ಕಾರಣಸಂಗತಿ ಎಲ್ಲವೂ ಸಾಧ್ಯ.

ನಾಗಾರ್ಜುನನ ಪ್ರಕಾರ ಸಂಸ್ಕøತಧರ್ಮ, ಅಸಂಸ್ಕøತ ಧರ್ಮಗಳೆರಡೂ ಸಾಪೇಕ್ಷವಾದವು; ಒಂದರ ಇರವು ಮತ್ತೊಂದರ ಇರವಿನ ಆಧಾರದ ಮೇಲೆ ನಿಂತಿದೆ. ಪರಸ್ಪರವಾದ ಈ ಅವಲಂಬನವಿರುವುದರಿಂದ ಎಲ್ಲವೂ ಶೂನ್ಯ ಎನ್ನಲು ಬಂದೀತು. ಪರಮಾರ್ಥವನ್ನು ಹೇಳುವಾಗ ಈ ಶಬ್ಧಗಳನ್ನು ವ್ಯವಹರಿಸುವುದು ಸಲ್ಲದು. ಪರಮಾರ್ಥವನ್ನು ನಾಗಾರ್ಜುನ ಅಲಂಬಶೂನ್ಯತೆ ಎಂದು ಕರೆಯುತ್ತಾನೆ. ಎಲ್ಲ ಧರ್ಮಗಳ ಪರಮಾರ್ಥಸ್ಥಿತಿಯೂ ನಿರ್ವಾಣದಂತೆ ಅಚಿಂತ್ಯವಾದುದು, ಅವಣ್ರ್ಯವಾದುದು, ಉತ್ಪಾದಭಂಗವಿರಹಿತವಾದದ್ದು (ಅನುತ್ಪನ್ನಾ ಅನಿರುದ್ಧಾಹಿ ನಿರ್ವಾಣ ಮಿವ ಧರ್ಮತಾ) ಈ ಸ್ಥಿತಿಯ ಅರಿವಾದೊಡನೆ ನಾನು, ನೀನು, ಅದು, ಇದು ಈಗ, ಮುಂದೆ ಎಂಬ ವಿಶೇಷಗಳೆಲ್ಲ ಮರೆಯಾಗುತ್ತವೆ. ಈ ದೃಷ್ಟಿಯಿಂದಲೇ ಬುದ್ಧ ಆತ್ಮನಿದ್ದಾನೆಂದಾಗಲೀ ಆತ್ಮನಿಲ್ಲವೆಂದಾಗಲೀ ಹೇಳದಿದ್ದುದು (ಬುದ್ಧೈರ್ನಾತ್ಮಾ ಕಶ್ಚಿದಿತ್ಯಪ ದೇಶಿತಂ). ಈ ಎಲ್ಲ ನಾನಾತ್ವವೂ ವ್ಯಾವಹಾರಿಕ ನೆಲೆಗೆ ಸೇರಿದ್ದು. ಈ ನೆಲೆಯಲ್ಲಿ ಹೂಡುವ ವಾದವೆಲ್ಲವೂ ದುಷ್ಟವಾದುದು; ಅವುಗಳಿಂದ ತತ್ತ್ವ ಬೋಧವಾಗುವುದು ಸಾಧ್ಯವಿಲ್ಲ. ಶೂನ್ಯತೆ, ಅಶೂನ್ಯತೆಗಳೆಂಬುದೂ ಇದೇ ನೆಲೆಯ ಮಾತು. ಶೂನ್ಯತೆಯೇ ಒಂದು ದೃಷ್ಟಿಯೆಂದು ಬಗೆದರೆ ಅದು ತಪ್ಪಾಗುವುದು. ಎಲ್ಲ ದೃಷ್ಟಿಗಳ ತಪ್ಪನ್ನು ತೋರಿಸಲೆಂದೇ ಶೂನ್ಯತಾವಾದ ಪ್ರಸಕ್ತವಾಗಿರುವುದು; ಅದನ್ನೇ ದೃಷ್ಟಿಯೆಂದು ಹಿಡಿದರೆ ಆ ತಪ್ಪನ್ನು ನಿವಾರಿಸುವುದು ಸಾಧ್ಯವಿಲ್ಲ. ರೋಗದಲ್ಲಿರುವವರ ರೋಗ ಪರಿಹಾರಕ್ಕೆ ಮದ್ದನ್ನು ಸ್ವೀಕರಿಸಬೇಕು; ಆದರೆ ಮದ್ದೇ ಮತ್ತೊಂದು ರೋಗದಲ್ಲಿ ಪರ್ಯವಸಾನವಾದರೆ ಮದ್ದನ್ನು ಪರಿಹರಿಸುವುದು ಹೇಗೆ? ಇದು ಆರ್ಯದೇವನ ವಿವರಣೆ.

ಸಂಸಾರದ ನಿತ್ಯವ್ಯವಹಾರ ನಿರ್ವಹಣೆಯ ದೃಷ್ಟಿಯಿಂದ ಸಂವೃತಿ ಸತ್ಯ, ಪರಮಾರ್ಥದ ತತ್ತ್ವ ಬೋಧದ ದೃಷ್ಟಿಯಿಂದ ಪರಮಾರ್ಥ ಸತ್ಯ ಹೀಗೆ ಬುದ್ಧನ ಧರ್ಮದಲ್ಲಿ ಎರಡು ನೆಲೆಗಳನ್ನು ಮಾಧ್ಯಮಿಕರು ಅಂಗೀರಿಸುತ್ತಾರೆ. ಈ ಎರಡು ಸತ್ಯಗಳ ನಡುವೆ ಇರುವ ಭೇದವನ್ನು ತಿಳಿಯದೆ ಬುದ್ಧಶಾಸನದಲ್ಲಿರುವ ಗಂಭೀರವಾದ ತತ್ತ್ವವನ್ನು ತಿಳಿಯುವುದು ಸಾಧ್ಯವಿಲ್ಲವೆಂದು ನಾಗಾರ್ಜುನನ ಹೇಳಿಕೆ "ಯೇನ ಯೋರ್ನ ವಿಜಾನಂತಿ ವಿಭಾಗಂ ಸತ್ಯಯೋದ್ರ್ವಯೋಃತೇ ತತ್ತ್ವಂನ ವಿಜಾನನ್ತಿ, ಗಂಭೀರಂ ಬುದ್ಧಶಾಸನೇ" ಆದರೆ ಸಂವೃತಿಸತ್ಯಕ್ಕೂ ಪರಮಾರ್ಥಸತ್ಯಕ್ಕೂ ಸಂಬಂಧವಿಲ್ಲ ಎನ್ನಲಾಗದು. ಪರಮಾರ್ಥತತ್ತ್ವವನ್ನು ತಿಳಿಯಬೇಕಾದರೆ ಸಂವೃತಿಯನ್ನು ಆಶ್ರಯಿಸಲೇಬೇಕು. ಅದಿಲ್ಲದೆ ಪರಮಾರ್ಥನ ವಿಚಾರ ಹೇಳುವುದು ಸಾಧ್ಯವಿಲ್ಲ. ಮ್ಲೇಚ್ಛರ ಮುಂದೆ ಅವರಿಗೆ ತಿಳಿಯುವಂತೆ ಹೇಳಬೇಕಾದರೆ ಅವರ ಭಾಷೆಯನ್ನೇ ಅವಲಂಬಿಸುವಂತೆ, ವ್ಯವಹಾರದಲ್ಲಿರುವ ಜನರಿಗೆ ತತ್ತ್ವವನ್ನು ತಿಳಿಯಹೇಳಬೇಕಾದರೆ ಸಂವೃತಿ ಸತ್ಯವನ್ನು ಆಶ್ರಯಿಸಬೇಕೆಂದು ಆರ್ಯದೇವನ ವಿವರಣೆ, ನಿರ್ವಾಣವನ್ನು ಅರ್ಥಮಾಡಿಕೊಳ್ಳಲು ಪರಮಾರ್ಥಸತ್ಯದ ನೆಲೆಯಲ್ಲಿ ನಿಲ್ಲಬೇಕಾದುದು ಅಗತ್ಯ, ಪರಮಾರ್ಥದ ನೆಲೆ ವ್ಯವಹಾರದ ನೆಲೆಯಿಂದಲೇ ಅರ್ಥವಾಗಬೇಕು. ನಾಗಾರ್ಜುನ ಹೇಳುವಂತೆ-ವ್ಯವಹಾರ ಮನಾಶ್ರಿತ್ಯ ಪರಮಾರ್ಥೋನ ದೇಶ್ಯತೇ ಪರಮಾರ್ಥಮನಾಗಮ್ಯ ನಿರ್ವಾಣಂ ನಾಧಿಗಮ್ಯತೇ-ಈ ದೃಷ್ಟಿಯಿಂದ ಹೀನಯಾನ ಮಹಾಯಾನಗಳ ನಡುವೆ ಇರುವ ಸಂಬಂಧವನ್ನು ಕೂಡ ವಿವರಿಸುತ್ತಾರೆ. ಹೀನಯಾನ ಅಬದ್ಧವೆಂದಾಗಲೀ ಅಸತ್ಯವೆಂದಾಗಲೀ ಅಲ್ಲ; ಲೋಕಾನುವರ್ತನದಿಂದ ಬುದ್ಧ ಸಾಮಾನ್ಯಜನರ ಪರಿಭಾಷೆಯನ್ನೇ ಅವಲಂಬಿಸಿ ಹೇಳಿದುದು ಅದು. ಆದರೆ ಅದರ ಒಳಗೆ ಅಡಗಿರುವ ಗಂಭೀರವಾದ ತತ್ತ್ವವೇ ಪರಮಾರ್ಥ, ಮಹಾಯಾನ ಹೀಗೆ ಧರ್ಮತಾಸಮ್ಮಿತವಾಗಿದೆ. ಅದೂ ಅಲ್ಲದೆ, ನಿತ್ಯ ಜೀವನದ ಧಾರ್ಮಿಕ ಪ್ರಯೋಜನಗಳಲ್ಲಿ ಪ್ರಸಕ್ತರಾಗಿರುವ ಜನ ಯಾವಾಗಲೂ ಶೂನ್ಯತೆಯನ್ನೇ ಹೇಳುವುದು ಸರಿಯಲ್ಲವೆಂದು ಆರ್ಯದೇವನೇ ಹೇಳುತ್ತಾನೆ. ನಾಗಾರ್ಜುನನ ವ್ಯಾಖ್ಯಾನ ಕಾರನಾದ ಚಂದ್ರಕೀರ್ತಿಯ ಪ್ರಕಾರ ಹೀನಯಾನವೂ ಶೂನ್ಯತೆಯನ್ನೇ ಪ್ರತಿಪಾದಿಸುತ್ತದೆ. ಆದರೆ ಅದರಲ್ಲಿ ಪರಮಾರ್ಥವನ್ನು ಮುಟ್ಟುವ ಉಪಾಯವಿಲ್ಲದಿರುವುದೊಂದು ಕೊರತೆ. ಶಾಂತಿದೇವ ತನ್ನ ಬೋಧಿಚರ್ಯಾವತಾರದಲ್ಲಿ ಹೀನಯಾನವೆಲ್ಲ ಸಂವೃತಿಸತ್ಯವೆಂದು ನಿರೂಪಿಸಿದ್ದಾನೆ.

ಈ ವಾದದಿಂದ ಮಾಧ್ಯಮಿಕ ಪಂಥದ ಅಡಿಗಲ್ಲಾದ ಶೂನ್ಯತಾವಾದ ನಾಗಾರ್ಜುನನಲ್ಲಿ ಮೊದಲೇ ಇದ್ದಿತೆಂದೂ ಆದರೆ ನಾಗಾರ್ಜುನ ಅದನ್ನು ಸಂವೃತಿ ಪರಮಾರ್ಥಗಳ ನೆಲೆಯಲ್ಲಿ ನಿರೂಪಿಸಿದನೆಂದೂ ಸ್ಪಷ್ಟವಾಗುತ್ತದೆ. ಈ ಎರಡು ಸತ್ಯಗಳ ನಾಲ್ಕು ಆವೃತ್ತಗಳನ್ನು ಮಾಧ್ಯಮಿಕರು ಹೀಗೆ ವಿವರಿಸುತ್ತಾರೆ: ಪ್ರಥಮಾವೃತ್ತದಲ್ಲಿ ಸಂವೃತಿಯ ನೆಲೆಯಲ್ಲಿ ಅಸ್ತಿತ್ವ, ಪರಮಾರ್ಥದ ನೆಲೆಯಲ್ಲಿ ಶೂನ್ಯತೆ; ದ್ವಿತೀಯಾ ವೃತ್ತದಲ್ಲಿ ಪ್ರಥಮಾ ವೃತ್ತವೇ ಸಂವೃತಿಯ ನೆಲೆ, ಅಸ್ತಿತ್ವ-ಶೂನ್ಯತೆಗಳೆರಡೂ ಇಲ್ಲದಿರುವುದು ನೆಲೆ; ತೃತೀಯಾ ವೃತ್ತದಲ್ಲಿ ದ್ವಿತೀಯಾವೃತ್ತವೇ ಸಂವೃತಿಯ ನೆಲೆ, ತೃತೀಯಾವೃತ್ತದ ಎರಡನೆಯ ನೆಲೆ ಅಲ್ಲದಿರುವುದು ಪರಮಾರ್ಥದ ನೆಲೆ; ಚತುರ್ಥಾವೃತ್ತದಲ್ಲಿ ತೃತೀಯಾವೃತ್ತವೇ ಸಂವೃತಿಯ ನೆಲೆ, ತೃತೀಯಾವೃತ್ತದ ಎರಡನೆಯ ನೆಲೆ ಅಲ್ಲದಿರುವುದು ಪರಮಾರ್ಥ ನೆಲೆ, ಎಂದರೆ ಅಸ್ತಿತ್ವ-ಶೂನ್ಯತೆಗಳೆಂಬ ಎರಡು ಕೋಟೆಗಳು ಅನುಕ್ರಮವಾಗಿ ನಿರಸ್ತವಾಗಿ ಅತ್ಯಂತ ಶೂನ್ಯತೆಯನ್ನು ಮುಟ್ಟುತ್ತವೆ. ಒಂದು ಆವೃತ್ತದ ಪರಮಾರ್ಥನೆಲೆ ಮುಂದಿನ ಆವೃತ್ತದ ಸಂವೃತಿಯಾಗುತ್ತದೆ. ಹೀಗೆ ಶೂನ್ಯತೆಯ ವ್ಯಾಪ್ತಿ ಉತ್ತರೋತ್ತರವಾಗಿ ವಿಸ್ತರಿಸಿದರೂ ವಾಸ್ತವವಾದದ ಆಧಾರದ ಮೇಲೆಯೇ ಶೂನ್ಯತಾವಾದ ನಿಂತಿದೆಯೆಂಬುದು ನಿರ್ವಿವಾದ. ಇಲ್ಲಿ ಮಾಧ್ಯಮಿಕರು ಅನುಸರಿಸಿರುವ ಸಂವಿಧಾನ ನೇತಿ ನೇತಿ ಮಾರ್ಗ. ಅಸ್ತಿ-ನೇತಿಗಳ ಸಾಪೇಕ್ಷತೆಯಿಂದ ತತ್ತ್ವಸಿದ್ಧಿಯಾಗುವುದು.

ತಾತ್ತ್ವಿಕವಾಗ ಸಂಸಾರ-ನಿರ್ವಾಣಗಳೆಂಬವು ಸಂವೃತಿ, ಪರಮಾರ್ಥಗಳ ವಿಭಿನ್ನ ನೆಲೆಗಳಲ್ಲಿ ವ್ಯಕ್ತವಾಗುವ ಒಂದೇ ತತ್ತ್ವದ (ಶೂನ್ಯತೆಯ) ಎರಡು ಪ್ರಕಾರಗಳು, ಸಂಸಾರವು ನಿರ್ವಾಣಕ್ಕಿಂತ ಅತ್ಯಂತ ವಿಲಕ್ಷಿಣವಾದ್ದೆಂದು ಹೇಳುವುದು ತಪ್ಪು. ನಾಗಾರ್ಜುನನ `ಸಂಸಾರಸ್ಯ ನಿರ್ವಣಾತ್ ಕಿಂಚಿದಸ್ತಿ ವಿಶೇಷಣಂ ನ, ನಿರ್ವಾಣಸ್ಯ ಸಂಸಾರಾತ್ ಕಿಂಚಿದಸ್ತಿ ವಿಶೇಷಣಂ' ಎಂದು ಹೇಳಿದ್ದಾನೆ. ಸಂಸಾರವೆಂದರೆ ಪಂಚಸ್ಕಂಧಗಳ ಅವಿರತಸಂಯೋಗ, ವಿಪ್ರಯೋಗಗಳು. ಆದರೆ ಸ್ಕಂಧಗಳು ಸ್ವಭಾವಧರ್ಮದಲ್ಲಿ ಶೂನ್ಯತೆಯೇ ಎಂಬ ಮೇಲೆ ಸ್ಕಂಧಗಳಿಗೆ ಉತ್ಪತ್ತಿ-ಭಂಗಗಳು ಪ್ರಾತಿಭಾಸಿಕ ಅಥವಾ ವ್ಯಾವಹಾರಿಕ ಅಷ್ಟೇ ವಿನಾ ನಿಜವಲ್ಲ. ಸ್ಕಂಧಗಳೂ ಅನಿರ್ದೇಶ್ಯ ಧರ್ಮಗಳು. ಇದು ಆರ್ಯ ದೇವನ ವಿವರಣೆ. ಜಗತ್ತಿನ ದುಃಖ, ಕ್ಲೇಶ, ಪಾಪಗಳೆಲ್ಲ ವ್ಯಾವಹಾರಿಕ ನೆಲೆಯಲ್ಲಿ ಮಾತ್ರ ಗ್ರಾಹ್ಯ. ಪರಮಾರ್ಥದಲ್ಲಿ ಅದು ಸ್ವಚ್ಛಶೂನ್ಯತೆ. ಇದನ್ನು ಜ್ಞಾನದಿಂದ ತಿಳಿಯುವುದೇ ಮಾಧ್ಯಮಿಕರ ಗುರಿ. ಈ ವಿಚಾರದಲ್ಲಿ ಕಥೆಯೊಂದು ಅರ್ಥವತ್ತಾಗಿದೆ. ಆರ್ಯದೇವ ಸಿಂಹಳದಿಂದ ಹೊರಟು ಬಂದ ನಾಗಾರ್ಜುನನನ್ನು ಕಂಡು ಆತನ ಬಳಿ ಶಿಷ್ಯ ವೃತ್ತಿ ಮಾಡಲೆಂದು, ಒಳಗಿದ್ದ ನಾಗಾರ್ಜುನನಿಗೆ ಪರಿಚಾರಕ ಬಂದು ಆರ್ಯದೇವ ಎಂಬಾತ ಬಂದಿದ್ದಾನೆಂದು ಹೇಳಿದ. ನಾಗಾರ್ಜುನ ಪರಿಚಾರಕನಿಗೆ ಒಂದು ಬಟ್ಟಲು ಶುದ್ಧವಾದ ನೀರನ್ನು ಆರ್ಯದೇವನ ಬಳಿಗೆ ಒಯ್ಯುವಂತೆ ತಿಳಿಸಿದ. ಪರಿಚಾರಕ ಒಂದು ಪಾತ್ರೆಯಲ್ಲಿ ತಿಳಿ ನೀರನ್ನು ತುಂಬಿಕೊಂಡು ಆರ್ಯದೇವನ ಮುಂದೆ ಹಿಡಿಯಲು, ಆರ್ಯದೇವ ತನ್ನ ಬಳಿಯಿದ್ದ ಸೂಜಿಯೊಂದನ್ನು ತೆಗೆದು ನೀರಿನಲ್ಲಿ ಹಾಕಿದ. ಸೂಜಿ ನೀರನ್ನು ಸೀಳಿಕೊಂಡು ತಳದಲ್ಲಿ ಬಿದ್ದಿತು. ಆದರೂ ಅದು ಕಾಣಿಸುತ್ತಿತ್ತು. ಪರಿಚಾರಕ ಈ ವೃತ್ತಾಂತವನ್ನು ನಾಗಾರ್ಜುನನಿಗೆ ಹೇಳಲು ಆರ್ಯದೇವನ ಪ್ರತ್ಯುತ್ಪನ್ನ ಮತಿಯನ್ನು ಮೆಚ್ಚಿಕೊಂಡು ಅವನನ್ನು ಶಿಷ್ಯನಾಗಿ ಸ್ವೀಕರಿಸಿದ ಚೀನೀಯಾತ್ರಿಕ ಯುವಾನ್ ಛ್ವಾಂಗನ ಗ್ರಂಥದಲ್ಲಿ ಇದು ನಿರೂಪಿತವಾಗಿದೆ.

ಬುದ್ಧನ ವೈಭಜ್ಯವಾದ ಪುದ್ಗಲ ನಿರೂಪಣೆಗೆ ಪ್ರಯುಕ್ತವಾದದ್ದು. ಇದನ್ನು ನಾಗಾರ್ಜುನ ಎಲ್ಲ ಧರ್ಮಗಳಿಗೂ ಅನ್ವಯಿಸಿ ಮಾಧ್ಯಮಿಕಪಂಥ ನಿರ್ಮಿಸಿದ. ಮಾಧ್ಯಮಿಕ ದರ್ಶನದಲ್ಲಿ ಬುದ್ಧಕಾಯದ ಕಲ್ಪನೆಯಿದೆ. ನಿಃಸ್ವಭಾವವಾದ ಶೂನ್ಯತೆಯ ನಿಲುವನ್ನೇ ಹಿಡಿದು ಬುದ್ಧವನ್ನು ವಿವರಿಸುವ ಪ್ರಯತ್ನ ಸ್ವಾರಸ್ಯವಾಗಿದೆ. ಈ ಜಗತ್ತು ಶೂನ್ಯವಾದುದು, ತಥಾಗತಂ ಶೂನ್ಯವೇ (ತಥಾಗತೋ ನಿಃಸ್ವಭಾವೋ ನಿಃಸ್ವಭಾವಮಿದಂ ಜಗತ್). ಸ್ವಭಾವವೆಂದರೆ ಭೌತಿಕವಾದ, ಮೂರ್ತವಾದ, ನಾಮರೂಪ ವಿಶಿಷ್ಟವಾದ ಧರ್ಮ. ಕಾರಣ ಪ್ರತ್ಯಯಗಳ ನಿಯತಿಗೆ ಒಳಪಟ್ಟ ವ್ಯಕ್ತಿತ್ವ. ಪರಮಾರ್ಥದ ನೆಲೆಯಿಂದ ನೋಡಿದರೆ ಬುದ್ಧನಿಗೆ ಇಂಥ ಸ್ವರೂಪ ಇರದು. ಈ ಅರ್ಥವನ್ನೇ ವಿಸ್ತರಿಸಿ ಸ್ಕಂಧಗಳೂ ಸೇರಿ ತಥಾಗತನಾಗಲಿಲ್ಲ, ಸ್ಕಂಧಗಳನ್ನು ಬಿಟ್ಟು ತಥಾಗತನಿಲ್ಲ, ಅವನಲ್ಲಿ ಸ್ಕಂಧಗಳಿಲ್ಲ, ಸ್ಕಂಧಗಳು ಅವನಲ್ಲಿ ಇಲ್ಲ, ಸ್ಕಂಧಗಳಿದ್ದವನೇ ಬುದ್ದನೆನಿಸಿದ್ದರೆ ಅವನದೇ ಆದ ಸ್ವಭಾವವೆಲ್ಲಿ ಬಂದಿತು? ಸ್ವಭಾವದಿಂದ ಅವನು ಇಲ್ಲವೆಂದಮೇಲೆ ಪರಮಾರ್ಥದಲ್ಲಿ ಬುದ್ಧನಿರುವನೆಂದು ಹೇಳುವುದು ಹೇಗೆ? (ಬುದ್ಧಃ ಸ್ಕಂಧಾನುಪಾದಾಯ ಯದಿ ನಾಸ್ತಿ ಸ್ವಭಾವತಃ ಸ್ವಭಾವತಶ್ಚಯೋ ನಾಸ್ತಿ ಕುತಃಸ ಪರಭಾವತಃ). ಸ್ವಭಾವ, ಪರ-ಭಾವಗಳಿಲ್ಲದ ತಥಾಗತ ಶೂನ್ಯತಾ ಸ್ವಭಾವದವನೆಂದರೆ ಸರಿಯಾಗದು. `ಶೂನ್ಯಮಿತಿ ನ ವಕ್ತವ್ಯಂ ಅಶೂನ್ಯಮಿತಿ ವಾ ಭವೇತ್, ಉಭಯಂ ನೋಭಯಂ ಚೇತಿ ಪ್ರಜ್ಞಪ್ತ್ಯರ್ಥಂ ತು ಕಥ್ಯೆತೇ. ಅವನು ಶೂನ್ಯವೂ ಅಲ್ಲ, ಅಶೂನ್ಯವೂ ಅಲ್ಲ, ಎರಡೂ ಅಲ್ಲ, ಎರಡಲ್ಲದುದೂ ಅಲ್ಲ. ಎಂದಮೇಲೆ ತಥಾಗತನೆಂದು ಹೇಗೆ ಹೇಳುತ್ತಾರೆ? ಅದು ವ್ಯವಹಾರದ ಮಾತು (ಪ್ರಜ್ಞಪ್ತಿ). ತಥಾಗತನ ಸ್ವಭಾವ ಜಗತ್ತಿನ ಸ್ವಭಾವವೇ (ತಥಾಗತೋ ಯತ್ಸ್ವಭಾವಸ್ತತ್ಸ್ವಭಾವಮಿದಂಜಗತ್). ಅವನಿಗೆ ಪರಮಾರ್ಥದಲ್ಲಿ ಹುಟ್ಟುಸಾವುಗಳಿಲ್ಲ ಈ ನಿಲವು ಮುಂದೆ ತ್ರಿಕಾಯಗಳಲ್ಲಿ ಒಂದಾದ ಸ್ವಭಾವ ಕಾಯದ (ಬುದ್ಧಕಾಯ) ಕಲ್ಪನೆಗೆ ಎಡೆಮಾಡಿಕೊಟ್ಟಿತು.

ಮಾಧ್ಯಮಿಕ ದರ್ಶನದ ನ್ಯಾಯ, ತರ್ಕಗಳ ಪ್ರಭಾವ ವೇದಾಂತದ ಮೇಲೆ ಸ್ಪಷ್ಟವಾಗಿ ಬಿದ್ದಿತು. ಅದ್ವೈತವಾದದ ವ್ಯವಹಾರ-ಸತ್ತಾ, ಪರಮಾರ್ಥ-ಸತ್ತಾ, ನಾಗಾರ್ಜುನನ ಸಂವೃತಿಸತ್ಯ, ಪರಮಾರ್ಥ ಸತ್ಯಗಳನ್ನೇ ಅನುಸರಿಸಿ ರೂಪತಳೆದವು. ಮಾಧ್ಯಮಿಕರ ಶೂನ್ಯತೆಯೇ ವೇದಾಂತದ ಪ್ರಜ್ಞಾನಘನ, ಅವರ ಬುದ್ಧಕಾಯವೇ ಇವನ ಬ್ರಹ್ಮ.		
(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ